Ennolu Vaasavagi ಎನ್ನೊಳು ವಾಸವಾಗಿ ದಾಸನ ಮಾಡಿಕೋ
- madhwamaanasa3
- Aug 20, 2023
- 1 min read
Updated: Jan 11
ಎನ್ನೊಳು ವಾಸವಾಗಿ ದಾಸನ ಮಾಡಿಕೋ |
ಶ್ರೀಕರ ಶುಭಕರ ಅಭಯಂಕರ ||
ನೋಟ ಬೀರಿದರೂ ಕಾಣದೆ ನಿಸ್ಸೀಮ
ಕೇಳ ಹೋದರೆ ಅಗಮ್ಯ ನಿಗಮಾಂತ |
ನುತಿತತಿಗಳಿಗೆ ನಿಲುಕದ ನಿರವಧಿಕ ಗುಣಾರ್ಣವ
ಕೋಶ ಕೋಶದಲೂ ಆಕಾಶವ ತೋರಿದ ಕಿಶೋರ ||
ಬ್ರಹ್ಮಾಂಡದೊಳಗೆಲ್ಲ ನಿನ್ನಿಂದಲೆ ಸೃಜನ
ಪಿಂಡಾಂಡದೊಳಗೆಲ್ಲ ನಿನ್ನಿಂದಲೆ ಬೆಳಕು |
ಅಂಗಾಂಗಗಳೊಳಗೆಲ್ಲ ನಿನ್ನಿಂದಲೆ ಚೈತನ್ಯ
ಎನ್ನ ಪ್ರಾದೇಶ ಮಾತ್ರದೊಳು ನಿನಗಿಲ್ಲವೆ ಅವಕಾಶ ||
ಶಿಲೆಯಲ್ಲಿ ಕಲೆಯಾಗಿ ಅರಳಿ ಮೆರೆದೆ
ಕುಂಚದಲಿ ಚಿತ್ತಾರವಾಗಿ ಹೊಮ್ಮಿ ಕರ್ಷಿಸಿದೆ |
ತಾಳೆಗರಿಯಲಿ ಜ್ಞಾನವಾಹಿನಿಯಾಗಿ ಪ್ರವಹಿಸಿದೆ
ಎನ್ನ ಹೃತ್ಕಮಲವೊಂದೆ ಬರಿದಾಗಿ ತೋರಿತೆ ||
ರೂಪಲಾವಣ್ಯಗಳ ಕಾರಣರೂಪಿಯಿವ
ಬಿಂಕ ವೈಯ್ಯಾರಗಳನಿತ್ತ ವಿಧಾತೃ ನೀ |
ಸಾವಕಾಶದಿ ತನು ಮನ ವ್ಯಾಪಿಸಿದ ವಿಶ್ವಾತ್ಮ ನೀನು
ಸತ್ಯಾತ್ಮಸುಧೆಯಲಿ ರತನಾಗಿಸಿದ ಸರ್ವಾತ್ಮ ರತುನ ನೀನು ||
Comments