top of page

Keshavanama ಕೇಶವನಾಮ

  • Writer: madhwamaanasa3
    madhwamaanasa3
  • Mar 20, 2023
  • 2 min read

Updated: Jan 11


ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುವೆನು |

ದೋಷರಾಶಿ ನಾಶಮಾಡು ಶ್ರೀಶ ಕೇಶವ ||


ಶರಣು ಹೊಕ್ಕೆನಯ್ಯ ಎನ್ನ ಮರಣಸಮಯದಲ್ಲಿ ನಿನ್ನ |

ಚರಣಸ್ಮರಣೆ ಕರುಣಿಸಯ್ಯ ನಾರಾಯಣ ||


ಶೋಧಿಸೆನ್ನ ಭವದ ಕಲುಷ ಬೋಧಿಸಯ್ಯ ಜ್ಞಾನವೆನಗೆ |

ಬಾಧಿಸುವ ಯಮನ ಬಾಧೆ ಬಿಡಿಸು ಮಾಧವ ||


ಹಿಂದನೇಕ ಯೋನಿಗಳಲಿ ಬಂದು ಬಂದು ನೊಂದೆ ನಾನು ||

ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದ ||


ಭ್ರಷ್ಟನೆನಿಸಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆ |

ಶಿಷ್ಟರೊಡನೆ ಇಟ್ಟು ಕಷ್ಟಬಿಡಿಸು ವಿಷ್ಣುವೇ ||


ಮದನನಯ್ಯ ನಿನ್ನ ಮಹಿಮೆ ವದನದಿಂದ ನುಡಿಯುವಂತೆ |

ಹೃದಯದಲ್ಲಿ ಹುದುಗಿಸಯ್ಯ ಮಧುಸೂದನ ||


ಕವಿದುಕೊಂಡು ಇರುವ ಪಾಪ ಸವೆದು ಪೋಗುವಂತೆ ಮಾಡು |

ಜವನ ಬಾಧೆಯನ್ನು ಬಿಡಿಸೊ ಶ್ರೀ ತ್ರಿವಿಕ್ರಮ ||


ಕಾಮಜಾನಕ ನಿನ್ನ ನಾಮ ಪ್ರೇಮದಿಂದ ಪಾಡುವಂಥ |

ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ ||


ಮೊದಲು ನಿನ್ನ ಪಾದ ಪೂಜೆ ಒದಗುವಂತೆ ಮಾಡೊ ಎನ್ನ|

ಹೃದಯದೊಳಗೆ ಸದನ ಮಾಡು ಮುದದಿ ಶ್ರೀಧರ ||


ಹುಸಿಯನಾಡಿ ಹೊಟ್ಟೆ ಹೊರೆವ ವಿಷಯದಲ್ಲಿ ರಸಿಕನೆಂದು |

ಹುಸಿಗೆ ಹಾಕದಿರೋ ಎನ್ನ ಹೃಷಿಕೇಶನೆ ||


ಬಿದ್ದು ಭವದನೇಕ ಜನುಮ ಬದ್ಧನಾಗಿ ಕಲುಷದಿಂದ |

ಗೆದ್ದು ಪೋಪ ಬುದ್ಧಿ ತೋರೋ ಪದ್ಮನಾಭನೆ ||


ಕಾಮಕ್ರೋಧ ಬಿಡಿಸಿ ನಿನ್ನ ನಾಮ ಜಿಹ್ವೆಯೊಳಗೆ ನುಡಿಸೋ |

ಶ್ರೀ ಮಹಾನುಭಾವನಾದ ದಾಮೋದರ ||


ಪಂಕಜಾಕ್ಷ ನೀನು ಎನ್ನ ಮಂಕುಬುದ್ಧಿಯನ್ನು ಬಿಡಿಸಿ |

ಕಿಂಕರನ್ನ ಮಾಡಿಕೊಳ್ಳೊ ಸಂಕರ್ಷಣ ||


ಎಸು ಜನ್ಮ ಬಂದರೇನು ದಾಸನಲ್ಲವೇನು ನಾನು |

ಘಾಸಿ ಮಾಡದಿರು ಇನ್ನು ವಾಸುದೇವನೆ ||


ಬುದ್ಧಿಶೂನ್ಯನಾಗಿ ಎನ್ನ ಬದ್ಧಕಾಯ ಕುಹಕಮನವ |

ತಿದ್ದಿ ಹೃದಯ ಶುದ್ಧಮಾಡೋ ಪ್ರದ್ಯುಮ್ನನೆ ||


ಜನನಿ ಜನಕ ನೀನೆ ಎಂದು ನೆನೆವೆನಯ್ಯ ದೀನಬಂಧೋ |

ಎನಗೆ ಮುಕ್ತಿಪಾಲಿಸಿಂದು ಅನಿರುದ್ಧನೆ ||


ಹರುಷದಿಂದ ನಿನ್ನ ನಾಮ ಸ್ಮರಿಸುವಂತೆ ಮಾಡು ಕ್ಷೇಮ |

ಇರಿಸು ಚರಣದಲ್ಲಿ ಪ್ರೇಮ ಪುರುಷೋತ್ತಮ ||


ಸಾಧು-ಸಂಗ ಕೊಟ್ಟು ನಿನ್ನ ಪಾದಭಜನೆಯಿತ್ತು ಎನ್ನ |

ಭೇದ ಮಾಡಿ ನೋಡದಿರೋ ಹೇ ಅಧೋಕ್ಷಜ ||


ಚಾರು ಚರಣ ತೋರಿ ಎನಗೆ ಪಾರುಗಾಣಿಸಯ್ಯ ಕೊನೆಗೆ |

ಭಾರ ಹಾಕಿರುವೆ ನಿನಗೆ ನಾರಸಿಂಹನೆ ||


ಸಂಚಿತಾದಿ ಪಾಪಗಳು ಕಿಂಚಿತಾದ ಪೀಡೆಗಳು ಮುಂಚಿತಾಗಿ |

ಕಳೆಯಬೇಕೋ ಸ್ವಾಮಿ ಅಚ್ಯುತ ||


ಜ್ಞಾನ ಭಕುತಿ ಕೊಟ್ಟು ನಿನ್ನ ಧ್ಯಾನದಲ್ಲಿ ಇಟ್ಟು ಸದಾ |

ಹೀನಬುದ್ದಿ ಬಿಡಿಸೋ ಮುನ್ನ ಶ್ರೀ ಜನಾರ್ಧನ ||


ಜಪತಪಾನುಷ್ಠಾನವಿಲ್ಲ ಕುಪಥಗಾಮಿಯಾದ ಎನ್ನ|

ಕೃಪೆಯ ಮಾಡಿ ಕ್ಷಮಿಸಬೇಕು ಹೇ ಉಪೇಂದ್ರನೇ ||


ಮೊರೆಯ ಇಡುವೆನಯ್ಯ ನಿನಗೆ ಶರಧಿಶಯನ ಶುಭಮತಿಯ |

ಇರಿಸೋ ಭಕ್ತರೊಳು ಪರಮ ಪುರುಷ ಶ್ರೀ ಹರೇ ||


ಪುಟ್ಟಿಸಲೇ ಬೇಡ ಇನ್ನು ಪುಟ್ಟಿಸಿದಕೆ ಪಾಲಿಸಿನ್ನು |

ಇಷ್ಟು ಮಾತ್ರ ಬೇಡಿಕೊಂಬೆ ಶ್ರೀ ಕೃಷ್ಣನೇ ||


ಸತ್ಯವಾದ ನಾಮಗಳನು ನಿತ್ಯದಲ್ಲಿ ಪಠಿಸುವರಿಗೆ |

ಅರ್ತಿಯಿಂದ ಸಲಹುತಿರುವ ಕರ್ತೃ ಕೇಶವ ||


ಮರೆಯದಲೆ ಹರಿಯ ನಾಮ ಬರೆದು ಓದಿ ಪೇಳುವರಿಗೆ |

ಕರೆದು ಮುಕ್ತಿ ಕೊಡುವ ನೆಲೆಯಾದಿಕೇಶವ ||



Recent Posts

See All
Bideno Bideno ninna ಬಿಡೆನೋ ಬಿಡೆನೋ ನಿನ್ನ ಚರಣ

ಬಿಡೆನೋ ಬಿಡೆನೋ ನಿನ್ನ ಚರಣ ಕಮಲವ ಎನ್ನ ಹೃದಯ ಮಧ್ಯದೊಳಿಟ್ಟು ಭಜಿಸುವೆ ಅನುದಿನ ಬಲಿಯ ದಾನವ ಬೇಡಿ ಅಳದೆ ಬ್ರಹ್ಮಾಂಡ ನಳಿನೋದ್ಭವ ಬಂದು ಪಾದವ ತೊಳೆಯೆ ಉಗುರಿನ...

 
 
 
Uma Katyayini ಉಮಾ ಕಾತ್ಯಾಯಿನೀ ಗೌರೀ

ಉಮಾ ಕಾತ್ಯಾಯಿನೀ ಗೌರೀ ದಾಕ್ಷಾಯಿಣೀ ಹಿಮವಂತ ಗಿರಿಯ ಕುಮಾರಿ ರಮೆಯರಸನ ಪದಕಮಲಮಧುಪೆ ನಿತ್ಯ ಅಮರವಂದಿಪೆ ಗಜಗಮನೆ ಭವಾನೀ ಪನ್ನಗವೇಣೀ ಶರ್ವಾಣೀ ಕೋಕಿಲವಾಣಿ ಉನ್ನತಗುಣಗಣ...

 
 
 
Manava Shodhisabeku ಮನವ ಶೋಧಿಸಬೇಕು ನಿತ್ಯಾ

ಮನವ ಶೋಧಿಸಬೇಕು ನಿತ್ಯಾ ದಿನ ದಿನ ಮಾಡುವ ಪಾಪ ಪುಣ್ಯದ ವೆಚ್ಚ ||ಮನವ|| ಧರ್ಮ ಅಧರ್ಮ ವಿಂಗಡಿಸಿ ಅಧರ್ಮದ ನರಗಳ ಬೇರ ಕತ್ತರಿಸಿ ನಿರ್ಮಲಾಚಾರದಿ ಚರಿಸಿ ಪರಬೊಮ್ಮ...

 
 
 

コメント


9916678573

©2022 by Madhwamaanasa. 

bottom of page