Govinda Narayana ಗೋವಿಂದ ನಾರಾಯಣ
- madhwamaanasa3
- Aug 20, 2023
- 1 min read
Updated: Jan 11
ಗೋವಿಂದ ನಾರಾಯಣ
ಗೋವಿಂದ ನಾರಾಯಣ |
ಗೋವರ್ಧನ ಗಿರಿಯನೆತ್ತಿದ
ಗೊವಿಂದ ನಮ್ಮ ರಕ್ಷಿಸೈ ||
ಮಂಚ ಬಾರದು ಮಡದಿ ಬಾರಳು
ಕಂಚುಕನ್ನಡಿ ಬಾರವು |
ಸಂಚಿತಾರ್ಥದ ದ್ರವ್ಯ ಬಾರದು
ಮುಂಚೆ ಮಾಡಿರೊ ಧರ್ಮವ ||
ಅರ್ಥವ್ಯಾರಿಗೆ ಪುತ್ರರು ಯಾರಿಗೆ
ಮಿತ್ರ ಬಾಂಧವರು ಯಾರಿಗೆ |
ಕರ್ತೃ ಯಮನವರೆಳೆದು ಒಯ್ದಾಗ
ಅರ್ಥಪುತ್ರರು ಕಾಯ್ವರೆ ||
ತಂದು ಬಂದರೆ ತನ್ನ ಪುರುಷನ
ಬಂದಿರಾ ಬಳಲಿದಿರಾ ಎಂಬಳು |
ಒಂದು ದಿವಸ ತಾರದಿದ್ದರೆ
ಹಂದಿನಾಯಿಯಂತೆ ಬೊಗಳುವಳು ||
ಪ್ರಾಣವಲ್ಲಭೆ ತನ್ನ ಪುರುಷನ
ಕಾಣದೆ ನಿಲ್ಲಲಾರಳು |
ಪ್ರಾಣಹೋಗುವ ಸಮಯದಲ್ಲಿ
ಜಾಣೆ ಕರೆದರೆ ಬಾರಳು ||
ಉಂಟು ಕಾಲಕೆ ನಂಟರಿಷ್ಟರು
ಬಂಟರಾಗಿ ಕಾಯ್ದರು |
ಕಂಟಕ ಯಮನವರು ಎಳೆವಾಗ
ನೆಂಟರಿಷ್ಟರು ಬಾರರು ||
ಒಡವೆ ಅರಸಿಗೆ ಒಡಲು ಅಗ್ನಿಗೆ
ಮಡದಿ ಮತ್ತೊಬ್ಬ ಚೆಲುವಗೆ |
ಬಡಿದು ಹೊಡೆದು ಯಮನವರೆಳೆವಾಗ
ಎಡವಿ ಬಿದ್ದಿತು ನಾಲಗೆ ||
ದಿಟ್ಟತನದಲಿ ಪಟ್ಟವಾಳುವ
ಕೃಷ್ಣರಾಯನ ಚರಣವ |
ಮುಟ್ಟಿ ಭಜಿಸಿರೊ ಸಿರಿಪುರಂದರ
ವಿಠಲೇಶನ ಚರಣವ ||
Comments