


ಶ್ರೀ ಪು ರಂದರ ದಾಸರು
ಶ್ರೀನಿವಾಸ ನೀನೆ ಪಾಲಿಸೋ |
ಶೃತಜನಪಾಲ ಗಾನಲೋಲ ಶ್ರೀ ಮುಕುಂದನೇ ||
ಧ್ಯಾನ ಮಾಳ್ಪ ಸಜ್ಜನರ ಮಾನದಿಂ ಪರಿಪಾಲಿಪ |
ವೇಣುಗೋಪಾಲ ಗೋವಿಂದ ವೇದವೇದ್ಯ ನಿತ್ಯಾನಂದ ||

ವಿಜಯದಾಸರು
ನಿನ್ನ ಒಲುಮೆಯಿಂದ ನಿಖಿಲ ಜನರು ಬಂದು
ಮನ್ನಿಸಿ ಪೊರೆವರೋ ಮಹಾರಾಯ |
ಎನ್ನ ಪುಣ್ಯಗಳಿಂದ ಈ ಪರಿ ಉಂಟೇನೋ
ನಿನ್ನದೇ ಸಕಲ ಸಂಪತ್ತು ||
ಭೋಗವನು ಬಯಸುವೇ ಬಗೆಬಗೆಯಲಿ ರತಿಯ ರೋಗ ಬಲವಾಯಿತು ತಿದ್ದೆನ್ನ ಮತಿಯ - ಶ್ರೀ ವಾದಿರಾಜರು


ಗೋಪಾಲವಿಠಲದಾಸರು
ಅನ್ಯರಿಂದಲಿ ಸುಖವಾಯಿತು ಎಂಬುದಕಿಂತ
ನಿನ್ನಿಂದಾಯಿತು ಎಂಬ ಕ್ಲೇಶ ಮೇಲಯ್ಯ
ನಿನ್ನನರಿಯದೆ ಅನ್ಯರ ಬಲ್ಲೆನೆಂಬುದಕ್ಕಿಂತ
ಕಣ್ಣಿಲ್ಲದಿರುವ ಕುರುಡ ಮೇಲಯ್ಯ
ಪುಣ್ಯ ಪಾಪವರಿಯದೇ ಬದುಕುವ ಮನುಜನಿಗಿಂತ
ನಾಯಿ ಕುನ್ನಿ ಲೇಸಯ್ಯ
ಕುಲ ಹೀನನಾದರೂ ಸುಖ ದುಃಖಗಳು
ನಿನ್ನಿಂದಾಯಿತೆಂಬ ಮತಿ ಚೆನ್ನಾಗಿ ತಿಳಿಸಯ್ಯ
ಗೋಪಾಲವಿಠಲ, ಗೋಪಾಲವಿಠಲ, ಗೋಪಾಲವಿಠಲ

ಪುರಂದರದಾಸರು
ಹ್ಯಾಂಗೆ ಬರೆದಿತ್ತೋ ಪ್ರಾಚೀನದಲ್ಲಿ ।
ಹಾಂಗೆ ಇರಬೇಕು ಸಂಸಾರದಲ್ಲಿ ॥
ಪಕ್ಷಿ ಅಂಗಳದಲ್ಲಿ ಬಂದು ಕೂತಂತೆ ।
ಆ ಕ್ಷಣದಲ್ಲಿ ಹಾರಿ ಹೋದಂತೆ ॥
ನಾನಾ ಪರಿಯಲಿ ಸಂತೆ ನೆರೆದಂತೆ ।
ನಾನಾ ಪಂಥವ ಹಿಡಿದು ಹೋದಂತೆ ॥
ಮಕ್ಕಳಾಡಿ ಮನೆ ಕಟ್ಟಿದಂತೆ ।
ಆಟ ಸಾಕೆಂದು ಆಳಿಸಿ ಹೋದಂತೆ॥
ವಸತಿಕಾರನು ವಸತಿ ಕಂಡಂತೆ ।
ಹೊತ್ತಾರೆದ್ದು ಹೊರಟು ಹೋದಂತೆ॥
ಸಂಸಾರ ಪಾಶವ ನೀನೆ ಬಿಡಿಸಯ್ಯ।
ಕಂಸಾರಿ ಪುರಂದರವಿಠ್ಠಲರಾಯ ॥

ಗೋಪಾಲದಾಸರು
ಮನೆಯ ಕಟ್ಟುವರುಂಟು ಮಡದಿಮಕ್ಕಳುಂಟು
ಧನವ ಗಳಿಸುವರುಂಟು ಗಳಿಸದಿದ್ದವರುಂಟು
ಧನವ ಕಟ್ಟುವರುಂಟು ದಾನ ಮಾಡುವರುಂಟು
ಋಣವ ಕೊಟ್ಟವರುಂಟು ಋಣ ಮಾಡಿದವರುಂಟು
ಮಳೆಗಾರತನವಿದರೊಳು ಎಂದಿಗೂ ಬೇಡ
ಮುನಿಗಳು ಸಹಿತಾಗಿ ಮೋಸ ಹೋದರು ಇದಕೆ
ಗುಣಪೂರ್ಣ ಚೆಲ್ವ ಗೋಪಾಲವಿಠ್ಠಲ ನಿನ್ನ
ಗುಣಚಿಂತನೆಯೊಳಿಡು ಇಷ್ಟೆ ಸಾಕು ॥


ಮೀರಾಬಾಯಿ
ಜಗ ಮೇ ಸುಂದರ ಹೈ ದೋ ನಾಮ್|
ಚಾಹೇ ಕೃಷ್ಣ ಕಹೋ ಯಾ ರಾಮ||
ಏಕ್ ಹೃದಯ ಮೇ ಪ್ರೇಮ್ ಬಡಾವೆ
ಏಕ ತಾಪ-ಸಂತಾಪ ಮಿಟಾವೈ|
ದೋನೋ ಸುಖ ಕೇ ಸಾಗರ ಹೈ
ದೋನೋ ಪೂರ್ಣ ಕಾಮ ||

ಕನಕದಾಸರು
ವರಕವಿಗಳ ಮುಂದೆ ನರಕವಿಗಳ ವಿದ್ಯೆ ತೋರಬಾರದು
ಧರಣಿಯ ಕಲ್ಲಿಗೆ ಶರಣೆಂದು ಪೂಜೆಯ ಮಾಡಬಾರದು |
ಪಾಪಿಗಳಿದ್ದಲ್ಲಿ ರೂಪುಳ್ಳ ವಸ್ತುವ ತೋರಬಾರದು ತೋರಬಾರದು
ಬಹುಕೋಪಿಗಳಿದ್ದಲ್ಲಿ ಅನುಭಾವ ಗೋಷ್ಠಿಯ ಮಾಡಬಾರದು ||

ಶ್ರೀ ವಾದಿರಾಜರು
ತಾಳುವಿಕೆಗಿಂತ ತಪವು ಬೇರಿಲ್ಲ |
ಕೇಳಬಲ್ಲವರಿಗೆ ಹೇಳುವೆನು ಸೊಲ್ಲ ||
ದುಷ್ಟ ಮನುಜರು ಪೇಳ್ವ ನಿಷ್ಠುರದ ನುಡಿ ತಾಳು
ಕಷ್ಟ ಬಂದರೆ ತಾಳು ಕಂಗೆಡದೆ ತಾಳು
ನೆಟ್ಟ ಸಸಿ ಫಲ ಬರುವ ತನಕ ಶಾಂತಿಯ ತಾಳು
ಕಟ್ಟಿದ ಬುತ್ತಿ ಮುಂದೆ ಉಣಲುಂಟು ತಾಳು