Bhaja Govindam ಭಜ ಗೋವಿಂದಂ ಭಜ ಗೋವಿಂದಂ
- madhwamaanasa3
- Jul 7, 2024
- 1 min read
Updated: Jan 11
"ಭಜ ಗೋವಿಂದಂ ಭಜ ಗೋವಿಂದಂ ಗೋವಿಂದಂ ಭಜ ಮೂಢಮತೇಸಂಪ್ರಾಪ್ತೆ ಸನ್ನಿಹಿತೆ ಕಾಲೇ ನಹಿ ನಹಿ ರಕ್ಷತಿ ಡುಕೃಙ್ಕರಣೇ"
ಮನುಷ್ಯನ ಬುದ್ಧಿಗೆ ಮಂಕುಕವಿದಿದೆ. ಮಂದ ಬುದ್ಧಿಯುಳ್ಳವನಾಗಿದ್ದಾನೆ. ದಿನವೂ ನೂರೆಂಟು ತಾಪತ್ರಯಗಳಲ್ಲಿ ಬೆಂದು ಹೋಗುತ್ತಿದ್ದರೂ ಮಾಯೆಯ ಸೆಳೆತದಿಂದ ದೂರವಿರುತ್ತಿಲ್ಲ. ಪದೇ ಪದೇ ನೋವನ್ನು ಅನುಭವಿಸುತ್ತಿದ್ದಾನೆ. ಗೋವಿಂದನನ್ನು ಭಕ್ತಿಯಿಂದ ಭಜಿಸಿ ಆನಂದವನ್ನು ಪಡೆ. ನಿನ್ನ ಮರಣಕಾಲದಲ್ಲಿ ನಿನ್ನ ವಿದ್ಯಾಭ್ಯಾಸ, ಅಕ್ಷರಜ್ಞಾನ, ವ್ಯಾಕರಣ ಸೂತ್ರಗಳಾವುವು ನಿನಗೆ ನೆಮ್ಮದಿಯನ್ನು ಕೊಡಲಾರವು. ಅಂದ ಮೇಲೆ ಅವುಗಳನ್ನು ಅತಿಯಾಗಿ ಹಚ್ಚಿಕೊಳ್ಳದೇ ಮರಣ ಸಮಯದಲ್ಲಿ ಆನಂದವನ್ನು ನೀಡುವ ಗೋವಿಂದನನ್ನು ಸಂತತವಾಗಿ ಸ್ಮರಿಸಿರಿ. ಮನುಷ್ಯನನ್ನು ಮೃತ್ಯುವಿನಿಂದ ರಕ್ಷಣೆ ಮಾಡುವಲ್ಲಿ ವಿದ್ಯಾಭ್ಯಾಸಾದಿಗಳು ಸಮರ್ಥವಾಗಿಲ್ಲ.
ಮೂಢನಾದ ಮನುಷ್ಯನಿಗೆ ಹಣಸಂಪಾದಿಸುವುದೊಂದೇ ಗುರಿಯಾಗಿದೆ. ಎಷ್ಟು ಗಳಿಸಿದರೂ ತೃಪ್ತಿಯಿಲ್ಲ. ಇನ್ನೂ ಬೇಕು ಎನ್ನುವ ತವಕದಲ್ಲಿ ದುರ್ಮಾರ್ಗಗಳನ್ನು ಹಿಡಿದು, ಇತರರಿಗೆ ಮೋಸ ಮಾಡಿ, ಪ್ರಾಣಿ ಪಶುಗಳನ್ನು ಹೊಂದಿಸಿ, ಮತ್ತೊಬ್ಬರ ಸ್ವತ್ತನ್ನು ದೋಚಿ ಹೀಗೆ ಇನ್ನು ಅನೇಕ ಮಾರ್ಗಗಳಿಂದ ಹಣ ಸಂಗ್ರಹಣೆಯನ್ನು ಮಾಡುತ್ತಿರುವನು. ಸಂಗ್ರಹಿಸಿದ್ದನ್ನು ಸದ್ವಿನಿಯೋಗಿಸದೇ ವಿಷಯ ಲೋಲುಪನಾಗುತ್ತಿದ್ದಾನೆ. ಇಷ್ಟಾದರೂ ಅವನಿಗೆ ತಾನು ಸಂಗ್ರಹಿಸಿದ ಹಣದಿಂದಲಾಗಲಿ, ಪ್ರಾಪಂಚಿಕ ವಿಷಯಗಳಿಂದಲಾಗಲಿ ತೃಪ್ತಿ ನೆಮ್ಮದಿ ಇಲ್ಲ. ಆದ್ದರಿಂದ ಈ ರೀತಿಯ ವಿತ್ತ ಸಂಗ್ರಹಣೆಯನ್ನು ನಿಲ್ಲಿಸಿ ಸನ್ಮಾರ್ಗದಲ್ಲಿ ಕಷ್ಟಪಟ್ಟು ದುಡಿದದ್ದಕ್ಕೆ ಬರುವ ಹಣದಿಂದಲೇ ತೃಪ್ತನಾಗಬೇಕು. ಮಾನವನಿಗೆ ಆರ್ಥಿಕ ದಾಹ ಎಂದೂ ಕೊನೆಗಾಣುವುದಿಲ್ಲ.
Comments